ಅಭಿಪ್ರಾಯ / ಸಲಹೆಗಳು

ಇತಿಹಾಸ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆ

ಹಿನ್ನಲೆ:­-

ಸನ್ ಸಾವಿರದ ಎಂಟು ನೂರ ಎಂಭತ್ತೊಂಭತ್ತರ ಆಗಸ್ಟ್ 23 ರಂದು ಅಂದಿನ ಮೈಸೂರಿನ ಸಂಸ್ಥಾನದ ದಿವಾನರು, ಮಹಾನ್ ರಾಜತಾಂತ್ರಿಕ ನಿಪುಣರೂ ಆದ ಸರ್ ಕೆ.ಶೇಷಾದ್ರಿ ಐಯ್ಯರ್ ರವರು ತಮ್ಮ ದೂರದೃಷ್ಟಿತ್ವ ಮತ್ತು ವಿವೇಚನಾಶೀಲತೆಗಳಿಂದ ಸರ್ಕಾರಿ ನೌಕರರ ಅಕಾಲಿಕ ಮರಣದಿಂದ ಆತನ ಕುಟುಂಬದ ಮೇಲಾಗುವ ಸರ್ವಾಂಗೀಣ ಪರಿಣಾಮವನ್ನರಿತು ರಕ್ಷಣೆಯ ಭರವಸೆಯನ್ನು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ, “ಸರ್ಕಾರಿ ನೌಕರರು ವಯೋ ನಿವೃತಿ ಹೊಂದಿದ ಸಂದರ್ಭದಲ್ಲಿ ಜೀವನ ಸಂಧ್ಯಾಕಾಲದ ಆರ್ಥಿಕ ಅಗತ್ಯತೆಗಳನ್ನು ನಿರ್ವಹಿಸಲು, ದುರ್ದೈವವಶಾತ್ ಸೇವಾವಧಿಯಲ್ಲಿ ಮೃತಪಟ್ಟರೆ ಆ ನೌಕರನ ಕುಟುಂಬದ ಭವಿಷ್ಯ ಜೀವನ ಸುಭದ್ರತೆಯಿಂದ ಸಾಗಲು ಅಗತ್ಯವಾದ ಆರ್ಥಿಕ ಭದ್ರತೆಯನ್ನು ಒದಗಿಸುವ” ಕಡ್ಡಾಯ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸುವ ಸಲುವಾಗಿ ರಾಜ ಸಮುಖದಲ್ಲಿ ಟಿಪ್ಪಣಿಯೊಂದನ್ನು ಮಂಡಿಸಿದರು.  ಹೀಗೆ ಬೀಜಾಂಕುರಗೊಂಡ “ಕಡ್ಡಾಯ ವಿಮಾ ಯೋಜನೆ” ಯು ಹಲವು ಮಹೋದಯರ ವಿಚಾರಧಾರೆಗಳಿಂದ ಫಲಿತವಾಗಿ, ತಜ್ಞರ ಅಭಿಪ್ರಾಯಗಳನ್ನೊಳಗೊಂಡು ಪಕ್ವವಾಗಿ, 1891ರ ಜುಲೈ 20ನೇ ದಿನಾಂಕದಂದು ಮೈಸೂರು ಸರ್ಕಾರದ ಆದೇಶದ ಸಂಖ್ಯೆ 4544-273 ರ ಮೂಲಕ ಮೈಸೂರು ಸರ್ಕಾರದ ವಿಮಾ ಇಲಾಖೆ ವಿಧ್ಯುಕ್ತವಾಗಿ ಪ್ರಾರಂಭಿಸಲ್ಪಟ್ಟಿತು.  ಭಾರತದಲ್ಲಿ ಶ್ರೀಸಾಮಾನ್ಯನೊಬ್ಬನಿಗೆ ವಿಮೆಯ ಬಗ್ಗೆ ಯಾವುದೇ ಕಲ್ಪನೆಯೂ ಇರದ ಸಂದರ್ಭದಲ್ಲಿ ರಾಷ್ಟ್ರದಲ್ಲೇ ಪ್ರಪ್ರಥಮ ರಾಜ್ಯ ಸರ್ಕಾರಿ ವಿಮಾ ಇಲಾಖೆಯಾಗಿ ಸ್ಥಾಪಿತಗೊಂಡು, ಕಡಿಮೆ ದರದ ಪ್ರೀಮಿಯಮ್ ಗೆ ಉನ್ನತ ದರದ ವಿಮಾ ಮೊತ್ತವನ್ನು ಹಾಗೂ ರಾಷ್ಟ್ರದ ಬಹುತೇಕ ವಿಮಾ ಸಂಸ್ಥೆಗಳ ಪೈಕಿ ಅತಿ ಹೆಚ್ಚಿನ ದರದ ಅಧಿಲಾಭಾಂಶವನ್ನು ನೀಡುತ್ತಾ ಅತ್ಯಲ್ಪ ಆಡಳಿತ ವೆಚ್ಚದೊಂದಿಗೆ ಸಾಗಿ 121 ವರ್ಷಗಳ ಹಾದಿಯನ್ನು ಈ ಇಲಾಖೆಯು ಉಪಕ್ರಮಿಸಿದೆ.   

ಪ್ರಮುಖ ಚಾರಿತ್ರಿಕ ಘಟನಾವಳಿಗಳು

  1. ಘನವೆತ್ತ ಮೈಸೂರು ಮಹಾರಾಜರ ಸಮ್ಮುಖದಲ್ಲಿ ಅನುಮೋದನೆಗಾಗಿ ಮಂಡಿಸಲು ಮೈಸೂರು ಸರ್ಕಾರ ಜೀವ ವಿಮಾ ನಿಯಮಾವಳಿಯನ್ನು ಸಿದ್ಧಪಡಿಸುವ ಸಲುವಾಗಿ ದಿನಾಂಕ 12/07/1891ರಂದು ಅಂದಿನ ಮೈಸೂರು ರಾಜ್ಯ ನಿಯಂತ್ರಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
  2. ಮೈಸೂರು ರಾಜ್ಯ ಪತ್ರದ ಪ್ರಕಟಣೆಯಂತೆ “ಮೈಸೂರು ಸರ್ಕಾರ ಕಡ್ಡಾಯ ಜೀವ ವಿಮಾ ಯೋಜನೆ ಅನುಷ್ಟಾನ ಸಮಿತಿ” ಯು ದಿನಾಂಕ 27/10/1891 ರಂದು ರಚಿತಗೊಂಡು ದಿನಾಂಕ 1/12/1891 ರಿಂದ “ಮೈಸೂರು ಸರ್ಕಾರ ಕಡ್ಡಾಯ ಜೀವ ವಿಮಾ ಯೋಜನೆ”  ಜಾರಿಗೆ ಬಂದಿತು.
  3. ಆರಂಭಿಕವಾಗಿ ಪುರುಷ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಯೋಜನೆಯನ್ನು ದಿನಾಂಕ 11/7/1894 ರಿಂದ ಮಹಿಳಾ ಸರ್ಕಾರಿ ನೌಕರರಿಗೂ ವಿಸ್ತರಿಸಲಾಯಿತು.
  4. ಜನಪ್ರಿಯವಾದ ಯೋಜನೆಯನ್ನು ದಿನಾಂಕ 16/12/1915 ರಿಂದ ಸಾರ್ವಜನಿಕರಿಗೂ ವಿಸ್ತರಿಸಿ, ಸರ್.ಎಂ.ಎನ್.ಕೃಷ್ಣರಾವ್ ರವರನ್ನು ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
  5. ವಿಮಾ ಆದಾಯದ ಮೇರೆಗೆ ಪಾಲಿಸಿದಾರರಿಗೆ ಬೋನಸ್ ನೀಡುವ ಪದ್ಧತಿ 1917ನೇ ಸಾಲಿನಿಂದ ಜಾರಿಗೆ ಬಂದಿತು.
  6. 1935ರಲ್ಲಿ ವಿಧಾನವೀಧಿಯಲ್ಲಿ ಅಧಿಕಾರಿ ಶಾಖೆಯ ನಿಧಿಯ ವೆಚ್ಚದಲ್ಲಿ ಇಲಾಖೆಯ ಕಛೇರಿಗಾಗಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಯಿತು.
  7. ದಿನಾಂಕ 05/07/1946 ರಲ್ಲಿ ರಾಜ್ಯದ ಎಲ್ಲಾ ಬಗೆಯ ವಾಹನಗಳಿಗೂ ವಿಮೆ ಮಾಡಲು ಅನುವಾಗುವಂತೆ ವಾಹನ ವಿಮಾ ವ್ಯವಹಾರವನ್ನು ಪ್ರಾರಂಭಿಸಲಾಯಿತು.
  8. ದಿನಾಂಕ 01/09/1956 ರಲ್ಲಿ ಜೀವ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ ಭಾರತೀಯ ಜೀವ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಇದರಿಂದ  ಇಲಾಖೆಯಲ್ಲಿ ರಾಜ್ಯ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ವ್ಯವಹಾರ ಯೋಜನೆ ಮಾತ್ರ ಉಳಿಯಿತು.
  9. ದಿನಾಂಕ 23/09/1963 ರಿಂದ ವಿಮಾ ಪಾಲಿಸಿಗಳ ಆಧಾರದ ಮೇಲೆ ಸಾಲ ನೀಡುವ “ಸಾಲ ಮಂಜೂರಾತಿ ಕಾರ್ಯ” ಆರಂಭವಾಯಿತು.
  10. ದಿನಾಂಕ 01/01/1973 ರಲ್ಲಿ ಸಾಮಾನ್ಯ ವಿಮಾ ವ್ಯವಹಾರವನ್ನು ರಾಷ್ಟ್ರೀಕರಣಗೊಳಿಸಿ ಸಾಮಾನ್ಯ ವಿಮಾ ನಿಗಮವನ್ನು ಸ್ಥಾಪಿಸಲಾಯಿತು. ಇದರಿಂದ  ಈ ಇಲಾಖೆಯಲ್ಲಿ ರಾಜ್ಯ ಸರ್ಕಾರಿ ವಾಹನಗಳ ಮತ್ತು ರಾಜ್ಯ ಸರ್ಕಾರವು ಆರ್ಥಿಕ ಹಿತಾಸಕ್ತಿಹೊಂದಿದ ವಾಹನಗಳ ವಿಮಾ ವ್ಯವಹಾರ ಯೋಜನೆ ಮಾತ್ರ ಉಳಿಯಿತು.

     ಪ್ರಸ್ತುತ ಇಲಾಖೆಯು ಭಾರತ ಸಂವಿಧಾನದ 309ನೇ ಪರಿಚ್ಫೇದದನ್ವಯ ದತ್ತವಾದ ಅಧಿಕಾರ ವ್ಯಾಪ್ತಿಯಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ರಚಿಸಿರುವ  “ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಾವಳಿ – 1958”  ಹಾಗೂ ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿಗಳ ಮೇರೆಗೆ ಕಡ್ಡಾಯ ವಿಮೆ ಜಾರಿಗೊಳಿಸುವ ಕಾರ್ಯನಿರ್ವಹಿಸುತ್ತಿದೆ.  ಅಂತೆಯೇ ವಾಹನ ವಿಮೆ ಮತ್ತು ಕುಟುಂಬ ಕಲ್ಯಾಣ ನಿಧಿ ನಿರ್ವಹಣೆ ಕಾರ್ಯವನ್ನೂ ನಿರ್ವಹಿಸುತ್ತಿದೆ. ದಿನಾಂಕ 10-03-2011 ರಿಂದ ಜಾರಿಗೆ ಬಂದಂತೆ ರಾಜ್ಯ ಸರ್ಕಾರಿ  ನೌಕರರ ಸಾಮೂಹಿಕ ವಿಮಾ ಯೋಜನೆಯ ಆಡಳಿತ ಜವಾಬ್ದಾರಿಯು ಈ ಇಲಾಖೆಗೆ ವಹಿಸಲ್ಪಟ್ಟಿದೆ.

 

ಇತ್ತೀಚಿನ ನವೀಕರಣ​ : 26-02-2020 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸರ್ಕಾರಿ ವಿಮಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080